ಇಂದ್ರಪ್ರಸ್ಥ

ಮಹಾಭಾರತದಲ್ಲಿ ಕಂಡುಬರುವಂತೆ ಕೌರವರ ರಾಜಧಾನಿಯಾದ ಹಸ್ತಿನಾಪುರದ ಸಮೀಪದಲ್ಲಿರುವ ಒಂದು ಪಟ್ಟಣ. ಯಮುನಾ ನದಿಯ ತೀರಭಾಗದಲ್ಲಿದೆ. ದ್ರೌಪದಿಸ್ವಯಂವರ ನಂತರ ಧೃತರಾಷ್ಟ್ರ ಪಾಂಡವರನ್ನು ಬರಮಾಡಿಕೊಂಡು ಅವರಿಗೋಸ್ಕರ ರಚಿಸಿಕೊಟ್ಟ ವಾಸಸ್ಥಳ. ವಿಶ್ವಕರ್ಮನಿಂದ ನಿರ್ಮಿತವಾಗಿ ಇಂದ್ರನ ಅಪೇಕ್ಷೆಯಂತೆ ಇಂದ್ರಪ್ರಸ್ಥವೆಂಬ ಹೆಸರನ್ನು ಪಡೆಯಿತು. ಶ್ರೀಕೃಷ್ಣನ ಅಪ್ಪಣೆಯ ಮೇರೆಗೆ ಪ್ರಾಕಾರಗಳಿಂದಲೂ ಸೌಧಗಳಿಂದಲೂ ಎಲ್ಲ ಸಂಪತ್ತಿನಿಂದಲೂ ಕೂಡಿ ಮಹೇಂದ್ರಪುರಕ್ಕೆ ಸಮಾನವಾಗಿರುವಂತೆ ವಿಶ್ವಕರ್ಮನಿಂದ ಸಿದ್ಧಗೊಂಡಿತು. ಮಹಾಪ್ರಸ್ಥಾನ ಸಮಯದಲ್ಲಿ ಪಾಂಡವರು ಶ್ರೀಕೃಷ್ಣನ ಮೊಮ್ಮಗನಾದ ವಜ್ರನಿಗೆ ಪಟ್ಟಗಟ್ಟಿದ ಸ್ಥಳ. ಈಗಿನ ಹಳೆಯ ದೆಹಲಿಯೇ ಇದೆಂದು ಪ್ರತೀತಿ.							
	(ಬಿ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ